ಶಿಕ್ಷಣ

 	ಸಂಚಿತ ಜ್ಞಾನ, ಕುಶಲತೆ, ಸಂಸ್ಕøತಿ ಹಾಗೂ ಮೌಲ್ಯಗಳನ್ನು ಸಮುದಾಯ ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ವರ್ಗಾಯಿ ಸುವ ಒಟ್ಟಾರೆ ವಿಧಾನಗಳನ್ನು, ಅರ್ಥಾತ್ ಅಪೇಕ್ಷಿತ ಜ್ಞಾನ, ಕುಶಲತೆ, ಮೌಲ್ಯ ಇವೇ ಮೊದಲಾದವನ್ನು ವ್ಯಕ್ತಿ ಮೈಗೂಡಿಸಿಕೊಳ್ಳುವಂತೆ ಮಾಡುವ ಪ್ರಕ್ರಿಯೆಗಳ ಗುಚ್ಛವನ್ನು ಶಿಕ್ಷಣ ಎಂದು ಉಲ್ಲೇಖಿಸುವುದು ರೂಢಿ. ವಿದ್ಯಾಲಯಗಳಲ್ಲಿ ಏನು ಜರಗುತ್ತದೋ ಅದೇ ಶಿಕ್ಷಣ ಎಂಬ ಸಂಕುಚಿತ ದೃಷ್ಟಿಕೋನದಿಂದ ಮೊದಲ್ಗೊಂಡು ಜೀವನಾದ್ಯಂತ ವ್ಯಕ್ತಿಯ ಬೆಳೆವಣಿಗೆ ಮತ್ತು ವಿಕಾಸದ ಮೇಲೆ ಪ್ರಭಾವ ಬೀರುವ ಅಥವಾ ವ್ಯಕ್ತಿಯಲ್ಲಿ ಬದಲಾವಣೆ ಉಂಟುಮಾಡುವ ಎಲ್ಲ ಅನುಭವಗಳ ಸರ್ವನಾಮವೇ ಶಿಕ್ಷಣ ಎಂಬ ಅತಿ ವಿಶಾಲ ದೃಷ್ಟಿಕೋನದ ತನಕ ವಿಭಿನ್ನ ದೃಷ್ಟಿಕೋನಗಳಿವೆ. ಪೂರ್ವಯೋಜಿತ ಅನುಭವಗಳಿಂದ ಔಪಚಾರಿಕ ಕಲಿಕೆ ಜರಗುವುದು ನಿಜವಾದರೂ ಅಯೋಜಿತ ಅಥವಾ ಅನುದ್ದೇಶಿತ, ಆಕಸ್ಮಿಕ ಅನುಭವಗಳಿಂದಲೂ ಕಲಿಕೆ ಜರಗುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲದಿರುವುದು ಮತ್ತು ಕಲಿಕೆಯ ನಿರ್ಧಾರಕಗ ಳನ್ನು ನಿಷ್ಕøಷ್ಟವಾಗಿ ಗುರುತಿಸಲು ಇರುವ ತೊಡಕುಗಳು ಈ ಗೊಂದಲಕ್ಕೆ ಕಾರಣ ಎಂದೇ ಕೆಲವರು, ವಿದ್ಯಾಲಯಗಳಲ್ಲಿ ಪೂರ್ವಯೋಜಿತ ಅನುಭವಗಳಿಂದ ಜರಗುವ ಕಲಿಕೆಯನ್ನು ಅಸಾಂಪ್ರದಾಯಿಕ ಅಥವಾ ಔಪಚಾರಿಕ (ಫಾರ್ಮಲ್) ಶಿಕ್ಷಣ ಎಂದೂ ಇತರ ಸನ್ನಿವೇಶಗಳಲ್ಲಿ ಪೂರ್ವಯೋಜಿತ ಅನುಭವಗಳಿಂದ ಜರಗುವ ಕಲಿಕೆಯನ್ನು ಅಸಾಂಪ್ರದಾಯಿಕ ಅಥವಾ ಅನೌಪಚಾರಿಕ (ನಾನ್‍ಫಾರ್ಮಲ್) ಶಿಕ್ಷಣ ಎಂದೂ ಅಯೋಜಿತ, ಆಕಸ್ಮಿಕ ಅನುಭವಗಳಿಂದ ಜರಗುವ ಕಲಿಕೆಯನ್ನು ಪ್ರಾಸಂಗಿಕ ಅಥವಾ ಅವಿಧ್ಯುಕ್ತ (ಇನ್‍ಫಾರ್ಮಲ್) ಎಂದೂ ಉಲ್ಲೇಖಿಸುತ್ತಾರೆ. ಶಿಕ್ಷಣ ಎಂದರೇನು ಎಂಬುದರ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ ಅದರ ಪರಿಣಾಮ ಕುರಿತು ಭಿನ್ನಾಭಿಪ್ರಾಯಗಳಿಲ್ಲ. ಶಿಕ್ಷಣ ಎಂಬ ಸಂಸ್ಕಾರದಿಂದಾಗಿ ವ್ಯಕ್ತಿಗಳು ದೈಹಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ, ನೈತಿಕ ಮತ್ತು ಸಾಮಾಜಿಕ ವಾಗಿ ವಿಕಸಿಸುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. ಯಾವುದೇ ಸಮುದಾಯ ತನ್ನ ಸಂಚಿತ ಜ್ಞಾನ, ಸಂಸ್ಕøತಿ ಇವೇ ಮೊದಲಾದವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಸಲುವಾಗಿ ತನ್ನದೇ ಆದ ಔಪಚಾರಿಕ ಶಿಕ್ಷಣ ವ್ಯವಸ್ಥೆಯೊಂದನ್ನು ರೂಪಿಸಿರುತ್ತದೆ. ಇದರ ನಿರ್ವಹಣೆಗಾಗಿ ಶಿಕ್ಷಕರು ಎಂದು ಉಲ್ಲೇಖಿತವಾಗುವ ವ್ಯಕ್ತಿವರ್ಗ, ಕುಟುಂಬ, ಮಠ ಅಥವಾ ಮಸೀದಿ ಅಥವಾ ಚರ್ಚ್‍ನಂಥ ಮತೀಯ ಸಂಸ್ಥೆಗಳು ಅಥವಾ ಶಾಲೆ ಅಥವಾ ವಿದ್ಯಾಲಯಗಳಂಥ ಸಮುದಾಯಸ್ಥಾಪಿತ ಸಂಸ್ಥೆಗಳು ನಿಯೋಜಿತವಾಗಿರುತ್ತವೆ. ವಿಶೇಷ ತರಬೇತಿ ಪಡೆದಿರುವ ಮಂದಿಯ ನೆರವಿನಿಂದ ಔಪಚಾರಿಕ ಶಿಕ್ಷಣ ನೀಡುವ ಸಂಸ್ಥೆಗಳನ್ನು ಶಾಲೆ, ವಿದ್ಯಾಲಯ ಇತ್ಯಾದಿ ಪದಗಳಿಂದ ಗುರುತಿಸುವುದು ನಾಗರಿಕ ಸಮುದಾಯಗಳ ಸಂಪ್ರದಾಯ.

	ಶಿಕ್ಷಣವನ್ನು ಒಂದು ಪ್ರಕ್ರಿಯೆ ಎಂದು ಪರಿಗಣಿಸುವುದರ ಜೊತೆಗೆ ಒಂದು ಉತ್ಪನ್ನ ಎಂದು ಪರಿಗಣಿಸುವ ಪದ್ಧತಿಯೂ ಉಂಟು. ಸುಶಿಕ್ಷಿತ, ವಿದ್ಯಾವಂತ ಮುಂತಾದ ಪದಗಳು ನಿರ್ದಿಷ್ಟ ಪ್ರಕ್ರಿಯೆಯ ಉತ್ಪನ್ನಗಳ ಪ್ರತೀಕಗಳು. ಅಪೇಕ್ಷಿತ ಕಲಿಕೆ ಜರಗುವಂತೆ ಮಾಡುವುದಕ್ಕೆ ಸಂಬಂಧಿಸಿದ ಎಲ್ಲ ಅಂಶಗಳನ್ನೂ ಅಧ್ಯಯನ ಮಾಡುವ ಜ್ಞಾನಶಾಖೆ ಯನ್ನು ಶಿಕ್ಷಣ ಅಥವಾ ಶಿಕ್ಷಣಶಾಸ್ತ್ರ ಎಂದು ಉಲ್ಲೇಖಿಸಲಾಗುತ್ತಿದೆ.

	ಸಮುದಾಯಗಳ ಸಂಚಿತ ಜ್ಞಾನ ಹಾಗೂ ಸಂಸ್ಕøತಿಗಳು ಸಂಕೀರ್ಣವಾ ದಂತೆಲ್ಲ ಶಿಕ್ಷಣವೂ ಸಂಕೀರ್ಣವಾಗುತ್ತದೆ ಎಂಬುದಕ್ಕೆ ಶಿಕ್ಷಣದ ಇತಿಹಾಸವೇ ಸಾಕ್ಷಿ. ಶಿಕ್ಷಣಶಾಸ್ತ್ರ ವಿಕಸಿಸಲು, ಸಂಕೀರ್ಣವಾಗಲು ಇದೇ ಕಾರಣ. ಆಧುನಿಕ ಶಿಕ್ಷಣಶಾಸ್ತ್ರದಲ್ಲಿ ಶೈಕ್ಷಣಿಕ ತತ್ತ್ವಶಾಸ್ತ್ರ, ಶೈಕ್ಷಣಿಕ ಮನೋವಿಜ್ಞಾನ, ಶೈಕ್ಷಣಿಕ ಮೌಲ್ಯಮಾಪನ, ಶೈಕ್ಷಣಿಕ ತಂತ್ರವಿದ್ಯೆ, ಶೈಕ್ಷಣಿಕ ಮಾರ್ಗದರ್ಶನ ಮುಂತಾದ ಅನೇಕ ಶಾಖೆಗಳೂ ಪ್ರಾಥಮಿಕ ಶಿಕ್ಷಣ, ದ್ವಿತೀಯಕ (ಸೆಕೆಂಡರಿ) ಶಿಕ್ಷಣ, ಉನ್ನತ ಶಿಕ್ಷಣ, ವಿಶೇಷ ಶಿಕ್ಷಣ, ವೃತ್ತಿ ಶಿಕ್ಷಣ ಮುಂತಾದ ಅನೇಕ ಪ್ರಭೇದಗಳೂ ಇವೆ. ಸಾರ್ವತ್ರಿಕ ಶಿಕ್ಷಣ ಹಾಗೂ ಅದನ್ನು ಒದಗಿಸುವ ಶಾಲೆ ಮತ್ತು ಇದಕ್ಕೆ ಅಗತ್ಯವಾದ ಶಿಕ್ಷಕರನ್ನು ರೂಪಿಸುವ ಶಿಕ್ಷಕ ಶಿಕ್ಷಣ ವ್ಯವಸ್ಥೆಗಳು ಬಲು ಚರ್ಚಿತ ಹಾಗೂ ಬಲು ಪ್ರಮುಖ ವಿಷಯಗಳಾಗಿವೆ. ಶಿಕ್ಷಣಶಾಸ್ತ್ರಾಧ್ಯಯನ ಮತ್ತು ಶಿಕ್ಷಕ ತರಬೇತಿ ವ್ಯವಸ್ಥೆಗಳ ನಿರಂತರ ಉತ್ತಮೀಕರಣ ವ್ಯವಸ್ಥೆಯೂ ವಿಕಸಿಸುತ್ತಿದೆ. ಶಿಕ್ಷಣಶಾಸ್ತ್ರದ ಶಾಖೆಗಳ ಸಂಖ್ಯೆ ಹೆಚ್ಚುತ್ತಿರುವುದಲ್ಲದೆ ಅವುಗಳ ನಡುವಿನ ಸಂಬಂಧಗಳೂ ಸಂಕೀರ್ಣವಾಗುತ್ತಿವೆ.

 	ಶಿಕ್ಷಣದ ಗುರಿಗಳು ಏನಿರಬೇಕು ಎಂಬುದನ್ನು ನಿರ್ಧರಿಸುವುದರಲ್ಲಿ ಸಮುದಾಯದ ದಾರ್ಶನಿಕ ತಳಹದಿ, ಅದು ಅನುಸರಿಸುತ್ತಿರುವ ರಾಜಕೀಯ ವ್ಯವಸ್ಥೆ, ಅದರ ಆರ್ಥಿಕ ಆವಶ್ಯಕತೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಈ ಗುರಿಗಳನ್ನು ಆಧರಿಸಿ ಶಿಕ್ಷಣದ ವ್ಯಾಖ್ಯಾನಗಳನ್ನು ಅನೇಕರು ರೂಪಿಸಿರುವುದೂ ಕೊಂಚಮಟ್ಟಿಗೆ ಗೊಂದಲಕ್ಕೆ ಕಾರಣವಾಗಿದೆ. ಶಿಕ್ಷಣದ ಪ್ರಕ್ರಿಯೆ ಎಂತಿರಬೇಕು, ಶಿಕ್ಷಣದ ವಸ್ತು ಏನಿರಬೇಕು ಮುಂತಾದವುಗಳ ನಿರ್ಧರಿಸುವಿಕೆಯನ್ನು ಶಿಕ್ಷಣದ ಗುರಿಗಳು ಪ್ರಭಾವಿಸು ತ್ತವೆ. ಈ ಎಲ್ಲ ಅಂಶಗಳ ಮೇಲೆ ಮನೋವಿಜ್ಞಾನ ಮತ್ತು ಆಧುನಿಕ ತಂತ್ರವಿದ್ಯೆಯ ಪ್ರಭಾವವೂ ಕ್ರಮೇಣ ಹೆಚ್ಚುತ್ತಿದೆ. ಆಯ್ದ ಶಿಕ್ಷಣ ಆಯ್ದ ಕೆಲವರಿಗೆ ಪರಿಕಲ್ಪನೆಯನ್ನು ಉತ್ತಮ ಸಾರ್ವತ್ರಿಕ ಶಿಕ್ಷಣ ಎಲ್ಲರಿಗೂ ಕಡ್ಡಾಯವಾಗಿ ಹಾಗೂ ಜಾತ್ಯತೀತ ವ್ಯವಸ್ಥೆಯ ಪರಿಕಲ್ಪನೆಗಳು ಪ್ರತಿಸ್ಥಾಪಿಸುತ್ತಿರುವುದು ಶಿಕ್ಷಣದ ಎಲ್ಲ ಆಯಾಮಗಳ ಮೇಲೆ ಪ್ರಬಲ ಪ್ರಭಾವ ಬೀರುತ್ತಿದೆ. ಸಾಂಪ್ರದಾಯಿಕವಾದ ಔಪಚಾರಿಕ ಶಿಕ್ಷಣ ವ್ಯವಸ್ಥೆಗಳಿಗೆ ಪರ್ಯಾಯವಾಗಿ ನಾನಾ ಬಗೆಯ ಅಸಾಂಪ್ರದಾಯಿಕ ವ್ಯವಸ್ಥೆಗಳು, ಔದ್ಯಮೀಕರಣದ ಮಾನವ ಸಂಪನ್ಮೂಲ ಬೇಡಿಕೆಗಳನ್ನು ಪೂರೈಸಬಲ್ಲ ವಿಶಿಷ್ಟ ಶಿಕ್ಷಣಕ್ರಮಗಳೂ ರೂಪುಗೊಂಡು ವಿಕಸಿಸುತ್ತಿವೆ. ಶಿಕ್ಷಣವನ್ನು ಮಾನವನ ಮೂಲಹಕ್ಕು ಎಂದು ಪರಿಗಣಿಸಲಾಗಿದೆ. ಎಂದೇ ನಿರ್ದಿಷ್ಟ ಹಂತದ ವರೆಗಿನ ಶಿಕ್ಷಣವನ್ನು ಎಲ್ಲರೂ ಪಡೆಯಲೇ ಬೇಕಾದ ಸಾರ್ವತ್ರಿಕ ಶಿಕ್ಷಣ ಎಂದು ಪರಿಗಣಿಸಿ ಅದು ಎಲ್ಲರಿಗೂ ಉಚಿತವಾಗಿ ಸುಲಭಲಭ್ಯವಾಗುವಂತೆ ಮಾಡುವ ಪ್ರಯತ್ನ ಪ್ರಪಂಚದಾ ದ್ಯಂತ ನಡೆದಿದೆ. ಜಾಗತೀಕರಣ, ಔದ್ಯಮೀಕರಣ, ಮುಕ್ತಮಾರುಕಟ್ಟೆ ಆರ್ಥಿಕತೆಯ ಪ್ರಭಾವದಿಂದಾಗಿ ಶಿಕ್ಷಣದ ವಾಣಿಜ್ಯೀಕರಣವೂ ಆಗುತ್ತಿದೆ. ತತ್ಪರಿಣಾಮವಾಗಿ ಆರ್ಥಿಕ ದುರ್ಬಲರು ಉತ್ತಮ ಶಿಕ್ಷಣದಿಂದ ವಂಚಿತರಾಗುವುದನ್ನು ತಡೆಗಟ್ಟುವ ವಿಧಾನಗಳ ಆವಿಷ್ಕಾರದ ಪ್ರಯತ್ನವೂ ಜರಗುತ್ತಿದೆ.	
    *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ